Friday, March 19, 2010

ಕಾನೂನು ಕತ್ತೆ

ಕಾನೂನು ಕತ್ತೆ , ಇದು ನನ್ನ ಕಥೆಗೆ , ನನ್ನ ಮಾವ ಕೊಟ್ಟ ಶೀರ್ಷಿಕೆ .......

ಆಫೀಸ್ ನಲ್ಲಿ ಯಾವುದೋ ಮೀಟಿಂಗ್ ನಡೆಯುತ್ತಿರುವಾಗ , ಮೊಬೈಲ್ ರಿ೦ಗಣಿಸಿತ್ತು. ಊರಿಂದ ಅಜ್ಜನ ಫೋನ್. ಮೆತ್ತಗೆ ಫೋನ್ ತೆಗೊಂಡೆ , "ವೇಕು ( ನನ್ನ ಶಾರ್ಟ್ ನೇಮ್ ) , income tax department ಸ್ಪೀಡ್ ಪೋಸ್ಟ್ ಬಂದಿದೆ , ತೆಗೊಬೇಕಾ ? ಅಥವಾ ರಿಟರ್ನ್ ಮಾಡಬೇಕಾ?" . "ತೆಗೊಳ್ಳಿ" ಎಂದು ಹೇಳಿ ಫೋನ್ ಇಟ್ಟೆ. ಆಫೀಸ್ ನಲ್ಲಿ ಕೆಲಸದ ಒತ್ತಡದ ಕಾರಣ ಮತ್ತೆ ಅದರ ಬಗ್ಗೆ ಯೋಚಿಸಲು ಸಮಯ ಸಿಗಲಿಲ್ಲ.


ಪ್ರತೀ ತಿಂಗಳ ಸಂಬಳದಿಂದ income ಟ್ಯಾಕ್ಸ್ ಪ್ರಾಮಾಣಿಕವಾಗಿ ತೆರುವವರು ನಾವು. ರಿಟರ್ನ್ ಫೈಲಿಂಗ್ ಕೂಡ ಸಮಯಕ್ಕೆ ಸರಿಯಾಗಿ ಮಾಡಿದ್ದೆ. ಟ್ಯಾಕ್ಸ್ ಗೆ ನಿಗದಿತ ಹಣವನ್ನೇ ಕಟ್ಟಿದ ಕಾರಣ , department ನಿಂದ returns ಬರೋದೇನೂ ಇರಲಿಲ್ಲ. ಮತ್ತೆ ಯಾವ ಕಾರಣಕ್ಕೆ ಸ್ಪೀಡ್ ಪೋಸ್ಟ್ ಕಳುಹಿಸಿರಬಹುದು ? ಯೋಚಿಸಿ ಯೋಚಿಸಿ ಹಾಳಾದ ತಲೆಗೆ ," ನಾನೇನೂ ಸರಕಾರಕ್ಕೆ ಮೋಸ ಮಾಡಿಲ್ಲ , ಕಟ್ಟಬೇಕಿರೋ ಟ್ಯಾಕ್ಸ್ ಕಟ್ಟದೆ , ತಲೆ ತಪ್ಪಿಸಿ ಕುಳಿತಿಲ್ಲ, ಆದಾಯಕ್ಕೆ ಸರಿಯಾಗಿಯೇ ಆಸ್ತಿ ಸಂಪಾದಿಸಿಲ್ಲ ಇನ್ನು ಆದಾಯಕ್ಕೆ ಮಿಗಿಲಾಗಿ ಆಸ್ತಿ ಸಂಪಾದಿಸಿದ್ದೀರಿ ಎಂದು notice ಬರುವ ಪ್ರಮೇಯವೇ ಇಲ್ಲ . ಹಾಗಾಗಿ ಗಲ್ಲು ಶಿಕ್ಷೆಯಂತೂ ಆಗಲಾರದು, ಯಾವತ್ತಾದರೂ ಊರಿಗೆ ಹೋದಾಗ check ಮಾಡಿದರಾಯಿತು" ಎಂದು ಸಮಾಧಾನ ಹೇಳಿದ್ದೆ.

ಮೊನ್ನೆ ಯುಗಾದಿಗೆ ಊರ ಕಡೆ ಹೋದವನಿಗೆ , ಅಜ್ಜ ಸ್ಪೀಡ್ ಪೋಸ್ಟ್ ಬಗ್ಗೆ ನೆನಪಿಸಿದರು. ಲೆಟರ್ ಬಿಡಿಸಿ ನೋಡಿದೆ. ಅದೇನೋ ಲೆಕ್ಕಾಚಾರಗಳು , ಯಾವುದೊ section ಗಳು , ಉಹುಂ ತಲೆ ಬುಡ ಗೊತ್ತಾಗಲಿಲ್ಲ. ಇನ್ನೊಂದು ಬಾರಿ ಸರಿಯಾಗಿ ಓದಿದಾಗ ಬರೆದಿದ್ದು ತಲೆಗೆ ಹತ್ತಿತು. ಕಳೆದ ವರ್ಷ ನಾನು ಕೆಲಸ ಮಾಡುವ ಕಂಪನಿ ಸುಮಾರು (ವಾರ್ಷಿಕ) 19376 ರುಪಾಯಿಗಳಷ್ಟು ಹಣವನ್ನು ನನ್ನ ಪ್ರತೀ ತಿಂಗಳ ವೇತನದಿಂದ income tax ಎಂದು ಕಡಿತಗೊಳಿಸಿ , ಸರಕಾರಕ್ಕೆ ದಯಪಾಲಿಸಿತ್ತು. ಅದಕ್ಕೆ ಫಾರಂ 16 ಕೂಡ ಸಿಕ್ಕಿತ್ತು. ಅದನ್ನೇ income tax return file ಮಾಡುವಾಗ ನಮೂದಿಸಿದ್ದೆ. ಆದರೆ department ನ ಪ್ರಕಾರ ನಾನು 19379 ರುಪಾಯಿಗಳಷ್ಟು ವಾರ್ಷಿಕ ತೆರಿಗೆ ತೆರಬೇಕಾಗಿತ್ತು. ಅಂದರೆ ನಾನು 3 ರುಪಾಯಿ ಕಡಿಮೆ ತೆರಿಗೆ ಕೊಟ್ಟಿದ್ದೆ. "ಅಕಟಕಟಾ ನನ್ನ ವಿಧಿಯೇ" 3 ಕೋಟಿಯೇ ? ಅಲ್ಲ 3 ಲಕ್ಷವೆ ? ಅದೂ ಅಲ್ಲ . 3 ಸಾವಿರ ಹೋಗಲಿ 300 ರುಪಾಯಿ , ಎಲ್ಲ ಬಿಟ್ಟು 3 ರೂಪಾಯಿಗಳು. ಊರ ಕಡೆ ಅದೇನೋ ಅಂತಾರೆ "ಉಮಿಲಿ ತಿಂದುದು ಜಾತಿ ಕಳೆವೊಂಡೆಗೆ" ಅಂತ.

ಕಾನೂನು ಕತ್ತೆ ಯಾಕಂತೀರಾ ? ಅಲ್ಲ ಮಹಾರಾಯರೇ.... 3 ರುಪಾಯಿ ಸರಕಾರಕ್ಕೆ ಕಟ್ಟು ಅಂತ ಹೇಳೋದಿಕ್ಕೆ , ಅದ್ಯಾವ ಪುಣ್ಯಾತ್ಮ 25 ರುಪಾಯಿ ಖರ್ಚು ಮಾಡಿ , ಸ್ಪೀಡ್ ಪೋಸ್ಟ್ ಕಳುಹಿಸಿದ್ದಾನೆ ? 25 ರುಪಾಯಿ ಖರ್ಚಾದರೂ ಪರವಾಗಿಲ್ಲ , ನಿನ್ನ 3 ರುಪಾಯಿ , ವಸೂಲಾತಿ ಮಾಡಿಯೇ ತೀರುತ್ತೇನೆ ಅನ್ನೋ income tax ನ ಛಲವಂತ ತ್ರಿವಿಕ್ರಮಾದಿತ್ಯನಿಗೆ ಅದ್ಯಾವ ಪ್ರಶಸ್ತಿ ಕೊಡ್ತೀರಾ ? ಅವನಿಗೇನು ಹೋಗುತ್ತೆ ಅಲ್ವಾ ? ಎಲ್ಲಾ ತೆರಿಗೆದಾರರ ಹಣ.

ಅವನೇನೋ ಕಳುಹಿಸುವ speed post ಕಳುಹಿಸಿಬಿಟ್ಟ . 3 ರುಪಾಯಿ ತೆರಿಗೆ ತೆರುವ ನನ್ನ ಪಾಡನ್ನು ಯೋಚಿಸಿ. ತೆರಿಗೆ ಕಟ್ಟಲು ಬ್ಯಾಂಕ್ ಗೆ ಹೋದರೆ , ನನ್ನನ್ನು ಮಂಗಳ ಗ್ರಹದ ಜೀವಿಯಂತೆ ನೋಡಿಯಾರು. ಅದಕ್ಕೆಂದೇ ಚಿಲ್ಲರೆ ತೆಗೆದುಕೊಂಡೇ ಹೋಗಬೇಕು. ಇಲ್ಲವಾದರೆ ನಿಮಗೆ ಗೊತ್ತಲ್ಲ ಅದರ ಗೋಳು. ತೆರಿಗೆ ಕಟ್ಟಿ ದ ರಶೀದಿಯನ್ನು income tax department ಗೆ ತೆಗೆದುಕೊಂಡು ಹೋಗಿ , ಕಳೆದ ವರ್ಷದ ರಿಟರ್ನ್ file ಮಾಡಿದ form ನ್ನು update ಮಾಡಿಸಬೇಕು. ಇದಕ್ಕೆ ಕಡಿಮೆಯೆಂದರೂ ಆಟೋ ರಿಕ್ಷಾ ಗೆ 100 ರುಪಾಯಿ ಕೊಡಬೇಕು. ಆಫೀಸ್ ಗೆ ಒಂದು ದಿವಸ ರಜಾ ಹಾಕಬೇಕು. ಇಲ್ಲದಿದ್ದರೆ ಗೊತ್ತಲ್ಲಾ ಕಾನೂನು ಕತ್ತೆ , ಅದೇನೂ ಮಾಡಬಲ್ಲದು.

 ಎಲ್ಲ ಯೋಚಿಸಿದಾಗ 3 ರುಪಾಯಿಗೋಸ್ಕರ 25 ರೂಪಾಯಿಗಳ ಸ್ಪೀಡ್ ಪೋಸ್ಟ್ ಕಳುಹಿಸಿದ ಕಾನೂನು ಕತ್ತೆಯೂ ಅಥವಾ ಕಂಪನಿ ಫೈನಾನ್ಸ್ ಡಿಪಾರ್ಟ್ಮೆಂಟ್ ಕೊಟ್ಟ form 16 ನ್ನು ಕಣ್ಣು ಮುಚ್ಚಿ ನಂಬಿದ ನಾನೇ ಕತ್ತೆಯೋ ಅರ್ಥವಾಗ್ತಾ ಇಲ್ಲ.

ಕೊನೆಗೆ ಒಂದು ಅನುಭವದ ಮಾತಂತೂ ಹೇಳ್ತೇನೆ. "ದೇವರು ವರ ಕೊಟ್ಟರೂ ಸರಿ , ಟೆಸ್ಟ್ ಮಾಡದೆ ತೆಗೊಬೇಡಿ , ಯಾಕಂದ್ರೆ ಕಾನೂನು ಕತ್ತೆ" .

2 comments:

  1. agree 100%...law implement maaduvavaru hesaragattegalu :-)) see if they go to court if you don't pay the 3 Rs!!!

    ReplyDelete