Saturday, March 6, 2010

ಅಂತೂ ಬಂತು ಕಾರು ಕಲಿಕಾ ರಹದಾರಿ ಪತ್ರ

ಇದೇನಿದು ಕಲಿಕಾ ರಹದಾರಿ ಪತ್ರ ಅಂದ್ಕೊಂಡ್ರಾ ? Learner's License ಮಾರಾಯರೇ.....
ಸಾಫ್ಟ್ವೇರ್ ಇಂಜಿನಿಯರ್ , ಕಾರ್ ಬಿಡಲು ಬರೋದಿಲ್ವೇ ? ಮನೆಯಲ್ಲಿ ಮಕ್ಕಳಿಗೂ ತಮಾಷೆಯ ವಸ್ತುವಾಗಿ ಬಿಟ್ಟಿದ್ದೆ. ಹೌದಪ್ಪಾ ಬರಲ್ಲ , ಏನೀಗ ? ಇಂಜಿನಿಯರಿಂಗ್ ಕಾಲೇಜಲ್ಲಿ ಅದನ್ನ ಕಲಿಸಲಿಲ್ಲ , ಕೀ ಬೋರ್ಡ್ ಕುಟ್ಟೋದು ಬರುತ್ತಲ್ವ ........ ಪ್ರಶ್ನೆ ಅದಲ್ಲ ಹೆಂಡತಿಗೆ ಕಾರ್ ಡ್ರೈವ್ ಮಾಡೋದು ಬರುತ್ತೆ ನಿಂಗ್ ಬರಲ್ವ ? ಅಲ್ಲಿದೆ ಪಾಯಿಂಟ್....... ಇಷ್ಟು ಸಾಕಲ್ವ ಸ್ಫೂರ್ತಿ ಉಕ್ಕಿ ಉಕ್ಕಿ ಬರಲು , ಬಂತು... ಕಲಿತೇ ಸಿದ್ಧ.
ಮುಂದಿದ್ದ ಪ್ರಶ್ನೆ ಎಲ್ಲಿ ಕಲಿಯೋದು ? ಬೆಂಗಳೂರಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರಗಳಿಗೇನೂ ಕಮ್ಮಿ ಇಲ್ಲ ಬಿಡಿ , ಆದ್ರೆ ಇಂಟರ್ನೆಟ್ಟಲ್ಲಿ ಕೆಲವೊಂದು ಡ್ರೈವಿಂಗ್ ಸ್ಕೂಲ್ ಗಳ ತರೇವಾರಿ reviews ಓದಿ ನಿಜವಾಗಿಯೂ ಭಯ ಬಿದ್ದಿದ್ದೆ. ದುಡ್ಡು ಕೊಟ್ಟು ,ಇಲ್ಲದ ತೊಂದರೆ ಮೈ ಮೇಲೆ ಎಳೆದು ಹಾಕಿಕೊಳ್ಳಲು ಸುತರಾಂ ಇಷ್ಟವಿರಲಿಲ್ಲ . ಯಾವುದೋ ಮಾರುತಿ ಡ್ರೈವಿಂಗ್ ಸ್ಕೂಲ್ ಇದೆ , ತುಂಬ ಸೇಫ್ , ಪ್ರೊಫೆಶನಲ್ ಸರ್ವಿಸ್ ಗೆಳೆಯರ ಮಾತು ಕೇಳಿ ಅಲ್ಲೇ ಸೇರಲು ಹೊರಟವನಿಗೆ ಇದು ಯಾಕೋ ತುಂಬ ತುಟ್ಟಿ ಅನಿಸಿತ್ತು. ಕ್ಲಾಸ್ ಗೆ ಬೇರೆ , ಲೈಸೆನ್ಸ್ ಗೆ ಬೇರೆ , ಟೆಸ್ಟ್ ಗೆ ಕಾರ್ ಬೇಕಿದ್ದರೆ ಅದರ ಬಾಡಿಗೆ ಬೇರೆ , ಅಯ್ಯಯ್ಯೋ ಇಷ್ಟೆಲ್ಲಾ ಕಷ್ಟ ಪಟ್ಟು ಕಾರ್ ಕಲೀಬೇಕಾ? ಮನೇ ಪಕ್ಕ ಇರೋ "ಅ ಆ ಇ ಡ್ರೈವಿಂಗ್ ಸ್ಕೂಲ್" ಸಾಕು ಅಂತ ತೆಪ್ಪಗೆ ಅಡ್ವಾನ್ಸ್ ಕೊಟ್ಟು ಬಂದೆ. "ನೀವು ಟೆನ್ಶನ್ ಮಾಡ್ಬೇಕಾಗೆ ಇಲ್ಲಾ ಸಾರ್ . ನೀವು ಬಂದು ಸೈನ್ ಮಾಡಿದ್ರೆ ಸಾಕು , ಇನ್ನೆಲ್ಲಾ ನಾವು ಮ್ಯಾನೇಜ್ ಮಾಡ್ತೀವಿ" ಅಂತ ಅಭಯ ಹಸ್ತ ಚಾಚಿದರು ಡ್ರೈವಿಂಗ್ ಸ್ಕೂಲ್ ನ ಪ್ರಿನ್ಸಿಪಾಲ್. ಧನ್ಯೋಸ್ಮಿ ಎಂದು ಮನೆಗೆ ಬಂದೆ.
ಶನಿವಾರದ ಶುಭ ದಿನ , Learner's License ತೆಗೊಳ್ಳಲು RTO ಆಫೀಸ್ ಗೆ ಹೋಗಬೇಕಾಗಿತ್ತು. ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಜಯನಗರದ RTO ಆಫೀಸ್ ಗೆ ಹೋದೆ. ಸ್ಕೂಲ್ ನ ಪ್ರಿನ್ಸಿಪಾಲ್ ಕೂಡ ಜೊತೆಗಿದ್ದರು. "ಸಾರ್ ನೀವಿಲ್ಲಿ ನಿಲ್ಲಿ , ಒಳಗೆ ಹೋಗಿ ಸೈನ್ ಮಾಡ್ಸಿದ್ರೆ ಮುಗೀತು " ಅಂತ ಒಂದು ಕೌಂಟರ್ ಮುಂದೆ ಇದ್ದ "Q" ನಲ್ಲಿ ನಿಲ್ಲಿಸಿ ಅದೆಲ್ಲೋ ಮಾಯವಾದರು. ಬಹುಶ: ಬೇರೆಯವರ License work ಕೂಡ ಇರಬಹುದು ಅಂತ ಯೋಚನೆ ಮಾಡ್ತಾ ಇರ್ಬೇಕಿದ್ರೆ "ಏನ್ ಬೇಕಿತ್ರೀ ?" ಅನ್ನೋ ಕರ್ಕಶ ಆದ್ರೆ ಪ್ರೀತಿ ಭರಿತ ಧ್ವನಿ ಕೇಳಿಸ್ತು. ಯಾರಪ್ಪ ಇದು ಅಂತ ತಿರುಗಿ ನೋಡಿದ್ರೆ "ಖಾಕಿ" , ಪೋಲೀಸಪ್ಪ, "ಸಾರ್ LL ಆಗಬೇಕಿತ್ತು " ಅಂದೇ "ಯೋ ಕಣ್ ಕಾಣ್ಸಲ್ವ , ನೋಡಿದ್ರೆ educated ಥರ ಇದ್ದೀಯ , ಬೋರ್ಡ್ ಓದೋಕೆ ಬರಲ್ವ ? ಬಂದ್ ಬಿಡ್ತಾರೆ " ಅಂದ್ಬಿಡೋದೇ , 'ರೀ' ಯಿಂದ 'ಯೋ' ಗೆ ಇಳಿದ ಪೋಲಿಸಪ್ಪನ ಪರಿ ನನ್ನನ್ನು ನಿಜವಾಗ್ಲೂ ಗಾಬರಿಗೊಳಿಸಿತ್ತು . ಬೋರ್ಡ್ ನೋಡಿದ್ರೆ "DL only " , ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೊರಗೆ ಬಂದು "LL section " ಹುಡುಕ್ತಾ ಹೋದ್ರೆ ಕಂಡಿದ್ದು ಜಾಂಬವಂತನ ಬಾಲದಂತಿದ್ದ Q ( Q ಹೇಗಿತ್ತು ಅನ್ನೋದನ್ನ ಕಲ್ಪಿಸಿಕೊಳ್ಳಿ ಅಂತ ಜಾಂಬವಂತನ ಬಾಲ ಅಂದೆ , ಹನುಮಂತನ ಬಾಲ ಅನ್ನೋ ಯಾವ ಲಕ್ಷಣವೂ ಇರಲಿಲ್ಲ ). ಹೆಂಗಸರಿಗೆ ಬೇರೇನೆ Q , ಒಂದು ಕ್ಷಣ ಅನಿಸದೆ ಇರಲಿಲ್ಲ (ಏನೂಂತ ಕೇಳಬೇಡಿ ಪ್ಲೀಸ್ )
ಈ ಬಾರಿ ಸರಿಯಾಗಿ ಬೋರ್ಡ್ ಓದಿ ನಿಂತಿದ್ದೆ. LL approve ಮಾಡೋ ಪರಮಾತ್ಮ ತುಂಬಾ ದೂರದಲ್ಲೆಲ್ಲೋ ಕುಳಿತಿದ್ರು . ಪರಮಾತ್ಮನ ಪೂಜಾರಿ ಗಣದವರು ಭಯಾನಕ ವಾತಾವರಣ ಸೃಷ್ಟಿ ಮಾಡಿದ್ರು , "ಒರಿಗಿನಲ್ಸ್ ಎಲ್ಲ ಇದ್ಯಲ್ಲ ? ಫೀಸ್ ಕಟ್ಟಿ ಬನ್ನಿ , ಎಷ್ಟು ಹೇಳಿದ್ರು ಗೊತ್ತಾಗಲ್ಲ " ಅಂತ ಗೊಣಗಾಟದ ಸಂಸ್ಕೃತ ಮಂತ್ರ ಹೇಳುತ್ತಿದ್ದರು. ನಾನು ಫೀಸ್ ಬೇರೆ ಕಟ್ಟಿಲ್ಲ , ಮ್ಯಾನೇಜ್ ಮಾಡ್ತೀವಿ ಅಂದ ಮಹಾಶಯರ ಪತ್ತೆ ಇಲ್ಲ . Q ಬಿಟ್ಟು ಹೋದ್ರೆ ಈ ದಿನವಂತೂ LL ಆಗೋ ಲಕ್ಷಣ ಖಂಡಿತ ಇಲ್ಲ. ಬಂದದ್ದು ಬರಲಿ , ಒಳಗಿರೋ ಪರಮಾತ್ಮನ ದಯೆ ಒಂದಿದ್ದರೆ LL ಸಿಕ್ಕೇ ಸಿಗುತ್ತದೆ ಅಂತ ಸುಮ್ಮನೆ ನಿಂತು ಬಿಟ್ಟೆ. ಬೇಗ ಬೇಗ ಬೇಗ ಬೇಗ ಅಂತ ಪರಮಾತ್ಮನ ಪೂಜಾರಿಗಳು ಕಿರುಚಾಡುತ್ತಿದ್ದರು . ಮಂಗಳೂರಿನ ಬಸ್ ಏಜೆಂಟ್ ಗಳ ಗಲಾಟೆಗಿಂತಲೂ ಮಿಗಿಲಾಗಿ .
ಒಳಗಿದ್ದ ಪರಮಾತ್ಮನಿಗೆ ಬಸ್ ಹಿಡಿಯುವುದಿತ್ತೇನೋ ಕಾಣೆ . LL ಕೊಡೋದೇಆತನ ಕೆಲಸ ಅಲ್ವ , ಬೇಗ ಬೇಗ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡುವುದಿದೆಯೋ , ಅಥವಾ ಸರಕಾರ Performance Bonus ಕೊಡುತ್ತೇನೋ? ಒಳಗಿರೋ ಪರಮಾತ್ಮನೇ ಬಲ್ಲ .
ಇನ್ನೇನು ಪರಮಾತ್ಮನ ಕೌಂಟರ್ ಬಂತು , ಪರಮಾತ್ಮ ತನ್ನ ಟೇಬಲ್ ಮೇಲೆ ಇದ್ದ ಒಂದು
ಸಿಗ್ನಲ್ ಲಿಸ್ಟ್ ನಿಂದ , ಇದೇನಪ್ಪ , ಅದೇನಪ್ಪ ಅಂತ ಕೇಳ್ತಾ ಇದ್ದ , ಬಹುಶ: ಆತನಿಗೂ ಡ್ರೈವಿಂಗ್ ಕ್ಲಾಸ್ ಬೇಕಾಗಿತ್ತೇನೋ :) ನನ್ನ ಮುಂದಿದ್ದ ಇಬ್ಬರಿಗೂ LL ಸಿಗಲಿಲ್ಲ . ಸರಿಯಾಗಿ ಸಿಗ್ನಲ್ ಕಲಿತು ಸೋಮವಾರ ಮತ್ತೆ ಬನ್ನಿ ಅಂದಿದ್ದ. ಮತ್ತೆ ಬರಬೇಕಾದ ಪಾಡನ್ನು ನೆನೆದು ಪಾಪ ಅನಿಸದೆ ಇರಲಿಲ್ಲ . ಈಗ ನನ್ನ ಸರದಿ , ನನ್ನ ಮುಂದೆ ಫುಲ್ mood off ಆಗಿದ್ದ ಪರಮಾತ್ಮ . "ನಾಳೆ ಬನ್ನಿ " ಅಂತಾನೇನೋ ಅಂತ ಕೈ ಕಟ್ಟಿ ನಿಂತವನಿಗೆ ಪರಮಾತ್ಮ ಸೈನ್ ಹಾಕಿ LL ಕೊಡೋದೇ ? ಅರೆ "No questions ?" ಅಂತ ನನ್ನ ಶರೀರವನ್ನೇ question mark "?" ಮಾಡಿ ನಿಂತ್ಕೊಂಡೆ . ಪುತ್ತೂರಲ್ಲಿ issue ಮಾಡಿದ two wheeler license ಇತ್ತು ನನ್ನ ಹತ್ರ , ಈ ಸಿಗ್ನಲ್ ಪ್ರಶ್ನೆಗಳನ್ನುLL ಮಾಡಿಸುವಾಗ ಪುತ್ತೊರಿನ ಪರಮಾತ್ಮನೇ ಕೇಳಿದ್ದ .ಮತ್ತೆ ಕೇಳಿ ತನ್ನ ಸಮಯ ವೇಸ್ಟ್ ಮಾಡಲು ಈ ಪರಮಾತ್ಮ ಸಿದ್ಧನಿರಲಿಲ್ಲ. ನನ್ನ ಗಂಟೇನು ಹೋಗ್ಬೇಕು ? LL ತೆಗೊಂಡು ಹೊರಗೆ ಬಂದೆ . ಮನೆಗೆ ಮರಳಲೆಂದು ಬೈಕ್ ಸ್ಟಾರ್ಟ್ ಮಾಡುವಾಗ ಹಲ್ಲು ಗಿಂಜುತ್ತ ಬಂದಿದ್ದ ಪ್ರಿನ್ಸಿಪಾಲ್ ಮಹಾಶಯ , "ನಾನ್ ಹೇಳ್ಲಿಲ್ವ ಸಾರ್ , ನೀವೇನು ಟೆನ್ಶನ್ ಮಾಡಬೇಕಾಗಿಲ್ಲ ಅಂತ , ನಾವು ಎಲ್ಲ ಮ್ಯಾನೇಜ್ ಮಾಡ್ತೀವಿ ನಾಳೆ ೭ ಗಂಟೆಗೆ ಬೆಳಿಗ್ಗೆ ಬನ್ನಿ , ಮೊದಲ ಕ್ಲಾಸ್ ಅಲ್ವ ೧ ಗಂಟೆ ತೆಗೊಳ್ಳಿ , ನೀವೇನು ಟೆನ್ಶನ್ ಮಾಡಬೇಕಾಗಿಲ್ಲ ಎಲ್ಲ ನಿಮ್ಮ ಟೀಚರ್ ಮ್ಯಾನೇಜ್ ಮಾಡ್ತಾರೆ " ಅಂದ , ಮೇಲಿಂದ ಕೆಳಗಿನ ವರೆಗೂ ಒಮ್ಮೆ ಆತನನ್ನು ನೋಡಿ ಮನೆಗೆ ವಾಪಾಸಾದೆ, ಖುಷಿಯಿಂದ , ಯಾಕಂದ್ರೆ ಅಂತೂ ಬಂತು ಕಾರು ಕಲಿಕಾ ರಹದಾರಿ ಪತ್ರ .
ನಾಳೆ ನನ್ನ ಫಸ್ಟ್ ಕಾರ್ ಡ್ರೈವಿಂಗ್ ಕ್ಲಾಸ್ .

5 comments:

  1. Congratulations man...!!! hope you enjoyed ur first drive with so called TEACHER...!!! :)

    I must say... nice write up man.. keep it up :)

    ReplyDelete
  2. Sooper maga. Kannada da aparimith pandith nagthiya :)

    ReplyDelete
  3. heheh...all the best diving allalla driving ge...

    ReplyDelete
  4. kannada odlikke majaa aagutte:-)

    ReplyDelete