Thursday, June 3, 2010

ಕಿವಿ ಮೇಲೊಂದು ಹೂವು !

     ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ದಿನಗಳು. ಓದಲೆಂದು ದೂರದ ಊರುಗಳಿಂದ ಬೆಳಗಾವಿಗೆ ಬಂದವರು ನನ್ನಂತೆಯೇ ಹಲವರು. ಬೆಳಗಾವಿಯಲ್ಲಿ ಹೋಟೆಲ್, ಟ್ರಾವೆಲ್ ಎಜೆನ್ಸಿ,ಪಾನ್ ಅಂಗಡಿ ಅಂತ ಮಂಗಳೂರು ಉಡುಪಿ ಕಡೆಯವರಿಗೇನೂ ಕಡಿಮೆಯಿಲ್ಲ. ಹೋದ ಹೋದ ಅಂಗಡಿಗಳಲ್ಲಿ , ನೀವು ಮಂಗಳೂರು ಕಡೆಯವರಾ ? ನಾವು ಕೂಡ ಮಂಗಳೂರವರು ಅಂತ social networking ಮಾಡೋದು , ಮಂಗಳೂರು ಕಡೆ ಬರುವ ಬಸುಗಳ ಡ್ರೈವರ್, ಕಂಡಕ್ಟರ್ ಗಳ ಪರಿಚಯ ಮಾಡ್ಕೊಳ್ಳೋದು ಅಂದ್ರೆ ಖುಶಿಯೋ ಖುಶಿ ಇದರ ಪರಿಣಾಮವೇ ಪಟ್ಟಿ ಅಂಗಡಿ ಜಗ್ಗಣ್ಣ , ಪಟ್ಟಿ ಅಂಗಡಿ ರಾಮಯ್ಯಣ್ಣ, ಕೊಲ್ಹಾಪುರ್ ಸರ್ಕಲ್ ಪಟ್ಟಿ ಅಂಗಡಿ , ಅಣ್ಣಪ್ಪ ಟೀ ಸ್ಟಾಲ್ , ಮಂಜುನಾಥ ಟೀ ಸ್ಟಾಲ್ , ಹೋಟೆಲ್ ದೀಪ, ಮಿನಿ ಮಂಗಳೂರು ಆಗಿದ್ದ ಹೋಟೆಲ್ ರಾಮದೇವ್ ಕಾಂಪೌಂಡ್, ಹೋಟೆಲ್ ವಿಘ್ನೇಶ್ ಅಯ್ಯಯ್ಯೋ ಒಂದೇ ಎರಡೇ , ಹೋದ ಕಡೆ ಎಲ್ಲ ಊರವರು ಅನ್ನೋ special treatment.

    ಬೆಳಗ್ಗೆ breakfast ಗೆ ನಮ್ಮ ಪಟಲಾಮಿನ ಸದಸ್ಯರು ಅಂದು ಶ್ರೀನಿವಾಸರ ಅಣ್ಣಪ್ಪ ಟೀ ಸ್ಟಾಲ್ ಹತ್ರ ಸೇರಿದ್ದರು. ಲೋಕಾಭಿರಾಮ ಮಾತಾಡುತ್ತ, ಉದಯವಾಣಿ ಪೇಪರ್ ಓದುತ್ತ, ಚಹಾ ಕುಡಿಯುತ್ತಾ ಇದ್ದವನಿಗೆ ಹೊಸ ಮುಖದ ವ್ಯಕ್ತಿಯೊಬ್ಬ ಶ್ರೀನಿವಾಸರ ಹತ್ತಿರ ತುಳು ಮಾತನಾಡುವುದು ಕೇಳಿಸಿತ್ತು. ಇವ್ರು ವಿವೇಕ್ ಅಂತ ಊರವರು , ಇಲ್ಲಿ ಇಂಜಿನಿಯರಿಂಗ್ ಮಾಡ್ತಿದ್ದಾರೆ ಅಂತ introduction ಬೇರೆ ಆಯಿತು. ಆ ವ್ಯಕ್ತಿ ಕುಶಲೋಪರಿ ಶುರು ಮಾಡ್ತು.

ಊರಲ್ಲಿ ಎಲ್ಲಿ ?
ಕಾಸರಗೋಡು .
ನಂದೂ ಕಾಸರಗೋಡು, ಯಾರ ಮಗ , ಯಾರ ಮೊಮ್ಮಗ, ಇಲ್ಲಿ ಹಾಸ್ಟೆಲ್ ನಲ್ಲೋ ? ರೂಮ್ ಮಾದ್ಕೊಂಡಿದೀರೋ ?
ಕ್ಲಾಸ್ ಮೇಟ್ಸ್ ಜೊತೆ ರೂಮ್ ಮಾಡ್ಕೊಂಡು,
ಹೌದಾ , ಎಲ್ಲಿ ಬರುತ್ತೆ ರೂಮ್ ?
ಶಿವಾ ಹೋಟೆಲ್ ಮುಂದೆ "ಸಾಯಿ ಸದನ" . ನೀವು ಏನ್ ಕೆಲಸ ಮಾಡ್ತಾ ಇದ್ದೀರಿ ?
ನಾನು ಶಿರಡಿ ಗೆ ಹೋಗಿದ್ದೆ, ವಾಪಸು ಊರಿಗೆ ಹೋಗ್ತಾ ಇಲ್ಲಿ ಸಂಬಂಧಿಕರನ್ನು ಭೇಟಿಯಾಗಿ ಹೋಗೋಣ ಅಂತ ಬಂದಿದೀನಿ.

ಈಯಪ್ಪ ಯಾಕೋ ಬಿಡೋ ಲಕ್ಷಣ ಕಾಣಿಸ್ತಾ ಇಲ್ಲ ಅಂತ ಅನಿಸಿದ ಮೇಲೆ , ಇವತ್ತಿಗಿಷ್ಟು ಸಾಕು ಅಂತ, ನಮಗೆ ಕಾಲೇಜ್ ಗೆ ಹೋಗೋದಿದೆ ಅಂತ ಅಲ್ಲಿಂದ ಕಾಲು ಕಿತ್ತಿದ್ದೆ.

ಸಾಯಂಕಾಲ ಕಾಲೇಜು ಮುಗಿಸಿ ರೂಮ್ ಗೆ ಬಂದು ಕುಳಿತಿದ್ದಾಗ , ಪಕ್ಕದ ರೂಮಿನ ಮೆಡಿಕಲ್ ವಿದ್ಯಾರ್ಥಿ ಮಂಗಳೂರಿನ ಸುಧಾಕರ್ ಬಂದು , ರೀ ವಿವೇಕ್ ಮದ್ಯಾಹ್ನ ನಿಮ್ಮ ಚಿಕ್ಕಪ್ಪ ಬಂದಿದ್ರು. ಶಿರಡಿಗೆ ಹೋಗಿ ವಾಪಸು ಹೋಗ್ತಾ ಪರ್ಸ್ ಕಳೆದು ಹೋಯಿತಂತೆ, ಕೈ ಯಲ್ಲಿ ದುಡ್ಡಿಲ್ಲ , ಹಾಗಾಗಿ ವಿವೇಕ್ ನ meet ಮಾಡಿ , ಬಸ್ ಗೆ ದುಡ್ಡು ತೆಗೊಂಡು ಹೋಗೋಣ ಅಂತ ಬಂದೆ. ವಿವೇಕ್ ಬರೋದು ಸಾಯಂಕಾಲ ಆಗುತ್ತೆ ಅಂದಿದ್ದಕ್ಕೆ , ಅಷ್ಟು ಹೊತ್ತು ಕಾಯೋಕಾಗಲ್ಲ, ಈಗ ಬಸ್ miss ಆದ್ರೆ ಕಷ್ಟ ಆಗೋಗುತ್ತೆ. ದಯವಿಟ್ಟು ಒಂದು 5೦೦ ರೂಪಾಯಿ ಇದ್ರೆ ಕೊಡಿ ಮನೆಗೆ ಹೋದ ತಕ್ಷಣ ನಿಮ್ ದುಡ್ಡು ವಿವೇಕ್ ಗೆ ಕಳಿಸ್ತೀನಿ , ಆತ ನಿಮಗೆ ಕೊಡ್ತಾನೆ ಅಂದ್ರು. ನಿಮ್ ಅಪ್ಪನ , ಅಜ್ಜನ ಹೆಸರೆಲ್ಲ ಹೇಳಿದ್ರು . ಹಾಗಾಗಿ 5೦೦ ರುಪಾಯಿ ಕೊಟ್ಟೆ ಅವರಿಗೆ ಅಂದ.

ಬೆಳಗ್ಗೆ ಅಣ್ಣಪ್ಪ ಟೀ ಸ್ಟಾಲ್ ನಲ್ಲಿ ನನ್ನನ್ನು ಭೇಟಿಯಾಗಿ , ಕುಲ ಗೋತ್ರ ಜನ್ಮ ಜನ್ಮಾಂತರದ ಪೂರ್ಣ ವಿವರವನ್ನು ತಿಳಿದ ಆ ಮಹಾನುಭಾವ ಸುಧಾಕರನಿಗೆ 5೦೦ ರ ಪಂಗನಾಮ ಹಾಕಿ ದೊಡ್ಡ ಚೆಂಡು ಹೂವೊಂದನ್ನು ಕಿವಿ ಮೇಲೆ ಇಟ್ಟು ತೆರಳಿದ್ದ.