Sunday, August 9, 2009

ತಿರುವುಗಳು

ಕೆಲವು ನಿರ್ಧಾರಗಳೇ ಹಾಗೆ, ಜೀವನವನ್ನೇ ಬದಲಾಯಿಸಿ ಬಿಡುತ್ತವೆ. ಇಲ್ಲದಿದ್ದಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿ ವಿವೇಕಾನಂದ ಕಾಲೇಜಿಗೆ ಉಪನ್ಯಾಸಕನಾಗಿ ಸೇರಬೇಕಿತ್ತೆ ?

ಇಂಜಿನಿಯರಿಂಗ್ ಕೊನೆಯ ಸೆಮಿಸ್ಟರ್ ರಿಸಲ್ಟ್ ನೋಡಿ, ಬೆಂಗಳೂರಿಗೆ ಬಸ್ ಹತ್ತಿದ್ದೆ. ಬೆಂಗಳೂರು ಅನ್ನ ಕೊಡುತ್ತದೆ ಅನ್ನುವ ಕನಸು ಹೊತ್ತ ನಾಲ್ಕು ಜನ ಗೆಳೆಯರು ವಿಜಯನಗರದ ಮೂಡಲಪಾಳ್ಯದಲ್ಲೊಂದು ಬಾಡಿಗೆ ಮನೆ ಹಿಡಿದಿದ್ದೆವು. ಬಂದಿಳಿದ ಮೊದಲನೆ ವಾರ ಅರಮನೆ ಮೈದಾನದಲ್ಲಿ ನಡೆದಿದ್ದ job fair (ಉದ್ಯೋಗ ಉತ್ಸವ) ನೋಡಿ ದಂಗಾಗಿದ್ದೆವು. ಕಾಲಿಡಲು ಜಾಗವಿಲ್ಲದಷ್ಟು ಜನ ಜಾತ್ರೆ. ಬಯೋಡಾಟಾ ಪಡೆದುಕೊಂಡು ಉದ್ಯೋಗಾಕಾಂಕ್ಷಿಗಳನ್ನು ಮರಳಿ ಮನೆಗೆ ಕಳುಹಿಸುವುದಕ್ಕಿಂತಲೂ ಪಡೆದ ಬಯೊಡಾಟಾ ಕಸದ ಬುಟ್ಟಿ ಸೇರುವುದು ನೋಡಿ ಮನಸಿಗೆ ನೋವಾಗಿತ್ತು. ಸರದಿಯಲ್ಲಿ ನಿಂತ ಜನರಲ್ಲಿ ಕೆಲೆವರು "AMWAY" ಬಿಸಿನೆಸ್ ಮಾಡಲು ಜನ ಹುಡುಕುತ್ತಿದ್ದರೆ ಇನ್ನು ಕೆಲವರು ತಮ್ಮ ಕೆಲವಾರು ವರ್ಷಗಳ ಉದ್ಯೋಗ ಉತ್ಸವಗಳ ಅನುಭವವನ್ನು ವಿವರಿಸುತ್ತಿದ್ದರು. ಉದ್ಯೋಗ ಬೇಟೆಯೋ ಮಾರಿ ಹಬ್ಬವೋ ಒಂದೂ ತಿಳಿಯದೆ , ಆಕರ್ಷಕ ಮಹಡಿಗಳ ಒಳಗಿರುವ ಕನಸಿನ ಆ ಕೆಲಸ ಸಿಗುವುದು ಕಷ್ಟವೆಂದು ಯೋಚಿಸಿದ ನಾನು ಗೆಳೆಯರಿಗೆ ಹೇಳದೆ ಊರಿನ ಬಸ್ ಹಿಡಿದಿದ್ದೆ.

ಕೆಲಸ ಸಿಗಲಿಲ್ವೇ ಇನ್ನೂ ? ಕೇಳಿ ಕೇಳಿ ತಲೆ ಹಾಳಾಗಿತ್ತು. ತೋಚಿದ್ದು ಒಂದೇ ದಾರಿ. ಅಪ್ಪ ಮಾಸ್ಟ್ರು ಅಜ್ಜ ಮಾಸ್ಟ್ರು, ನೀ ನಡೆದ ಹಾದಿಯಲಿ ಅಂತ ಎರಡೂ ಕೈ ಎತ್ತಿ ಶರಣು ಅಂದಿದ್ದೆ , ಮುಂದೆ ವಿವೇಕಾನಂದ ಕಾಲೇಜ್ ಭೂತಾಕಾರವಾಗಿ ನಿಂತಿತ್ತು. ಮಕ್ಕಳ ಪ್ರೀತಿಯನ್ನು ಗಳಿಸಲು ಹೆಚ್ಚು ಸಮಯ ಬೇಕಾಗಿ ಬರಲಿಲ್ಲ. ಅಜ್ಜನ ಹಾಗೆ ಅಪ್ಪನ ಹಾಗೆ ಒಳ್ಳೆ ಮಾಸ್ಟ್ರು ಅಂತ ಹೆಸರು ಬಹಳ ಬೇಗನೆ ಬಂತು. ಹೊಸ ಕೆಲಸದೊಂದಿಗೆ ಹೊಸ ಹೊಸ ಜನರ ಪರಿಚಯವೂ ಆಗಿತ್ತು. ಅದೇ ಪರಿಚಯ ಮುಂದೆ ಪ್ರೀತಿ ಆಗಬಹುದೆಂದೂ ಆ ಪ್ರೀತಿಯಿಂದಾಗಿ ಜೀವನವೇ ಬದಲಾಗಬಹುದೆಂದೂ ಆ ದಿವಸ ಖಂಡಿತವಾಗಿಯೂ ಅನಿಸಿರಲಿಲ್ಲ. ಕೈಯ್ಯಲ್ಲಿರುವ ಕೆಲಸಕ್ಕೆ ಅದಕ್ಕಿದ್ದ ಸಂಭಾವನೆಗೆ ಮನೆಯವರು ಅದೇ ಪ್ರೀತಿಯನ್ನು ಮನೆ ತುಂಬಿಸಿಕೊಳ್ಳಲು ಒಪ್ಪುವುದು ಅಸಾಧ್ಯದ ಮಾತಾಗಿತ್ತು. ಪ್ರೀತಿಯನ್ನು ಪ್ರೀತಿಸಿ ಮದುವೆಯಾಗುವುದೊಂದೇ ಗುರಿಯಾಗಿರುತ್ತಿದ್ದರೆ ಅಲ್ಲೇ ಇದ್ದು ಮದುವೆ ಆಗಿ ಬಿಡಬಹುದಿತ್ತು. ಆದರೆ ನಮ್ಮ ಮದುವೆಗೆ ಮನೆಯವರು ಒಪ್ಪಬೇಕಿತ್ತು. ಒಪ್ಪಬೇಕಿದ್ದರೆ, ನಮಗೆ ಅಂದು ತೋಚಿದ್ದು ಒಂದೇ ಮಾತು. ಇನ್ನು ಹೆಚ್ಚು ಸಂಬಳ ಇರುವ ಕೆಲಸ ಹುಡುಕಬೇಕಾಗಿತ್ತು. ಮನೆಯವರ ಕಷ್ಟಕ್ಕೆ ಹೆಗಲು ಕೊಟ್ಟು ನಡೆಯಬೇಕಾಗಿತ್ತು. ಸಮಾಜದ ಕೊಂಕು ಮಾತುಗಳಿಗೆ ಸೊಪ್ಪು ಹಾಕದೆ ತಲೆಯೆತ್ತಿ ನಡೆಯುವಂತಹ , ಎಲ್ಲರನ್ನೂ ಜೊತೆಗೆ ನಡೆಸುವಂತಹ ಆತ್ಮವಿಶ್ವಾಸ ಬೇಕಾಗಿತ್ತು.

ಕಣ್ಣುಬಿಟ್ಟಾಗ ಕಂಡಿದ್ದು ನಿಟ್ಟೆ ಕಾಲೇಜು. ಬಹುಶಃ ಕನಸಲ್ಲೂ ಎಣಿಸದಷ್ಟು ಅವಕಾಶಗಳ ಸುರಿಮಳೆ ಹರಿಸಿದ್ದು ಈ ದಿಟ್ಟ ಹೆಜ್ಜೆ. ವಿದ್ಯಾರ್ಥಿಗಳ ಜೊತೆಗೆ ಕಳೆದ ಆ ಸಮಯ ಜವಾಬ್ದಾರಿಯ ಭಾರವನ್ನು ಕ್ಷಣಕಾಲಕ್ಕೆ ಮರೆಯಾಗಿಸಿತ್ತು. ಇನ್ನೇನು ಕಳೆದೇ ಹೊದೆನೇನೋ ಅನ್ನುವಷ್ಟರಲ್ಲಿ ಜೀವನದ ಐಷಾರಾಮಿ ಮುಖವನ್ನು ತೋರಿಸಿತ್ತು ಇನ್ಫೋಸಿಸ್ ಮೈಸೂರಿನಲ್ಲಿ ನಡೆದ ತರಬೇತಿ, ಇದೊಂದು ಕೆಲಸ ಸಿಕ್ಕಿ ಬಿಟ್ಟರೆ ಮತ್ತೆ ಹಣದ ಚಿಂತೆಯಿಲ್ಲ, ಮನೆಯವರ ಕಷ್ಟಕ್ಕೆ ಪಾಲುದಾರನಾಗಿ , ಜವಾಬ್ದಾರಿಗಳ ಹೊರೆಯನ್ನು ಬೆನ್ನಲ್ಲಿ ಸ್ವತಂತ್ರವಾಗಿ ಹೊತ್ತುಕೊಂಡರೆ, ಮದುವೆಗೆ ಮನೆಯವರನ್ನು ಒಪ್ಪಿಸುವುದು ಬಹಳ ಕಷ್ಟ ಆಗಲಾರದು ಅನ್ನುವ ಒಂದು ಆಸೆ , ಕಂಪ್ಯೂಟರ್ ಇಂಜಿನಿಯರ್ ಗಳ ವಾರಗಳ ಒಡನಾಟ ನಿಟ್ಟೆ ಯಿಂದ ಮತ್ತೆ ಬೆಂಗಳೂರಿನ ಕಾಂಕ್ರೀಟ್ ಕಾಡಿನ ಮಡಿಲಿನಲ್ಲಿ ತಂದು ಮಲಗಿಸಿತ್ತು.

ಈ ಬಾರಿ ಉದ್ಯೋಗ ಉತ್ಸವಗಳ ಗೋಜಿಗೆ ಹೋಗದೆ, ತನ್ನ ಪಾಡಿಗೆ ಒಂದು ಚಿಕ್ಕ ಕೋರ್ಸ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಚಿಕ್ಕದಾದ ಕೆಲಸ ಹಿಡಿಯುವುದು ಕಷ್ಟವಾಗಲಿಲ್ಲ. ಚಿಕ್ಕದಾದ ಆ ಕೆಲಸವೇ ಮುಂದೆ ಬೆಳೆದು ಹೆಮ್ಮರವಾಗಿ ಜೀವನಕ್ಕೆ ಆಸರೆಯಾಗಿ ಮನೆಯವರನ್ನು ಒಪ್ಪಿಸಿ, ಬಯಸಿದ ಪ್ರೀತಿಯನ್ನು ಮದುವೆಯಾಗಿಸಿತ್ತು. ವರ್ಷಗಳಿಂದ ಆಸೆಯಗಿದ್ದದ್ದು ಇದ್ದಕ್ಕಿದ್ದಂತೆಯೇ ವಸ್ತುಸ್ಥಿತಿಯಾಗಿತ್ತು. ಅನಿಸಿದ್ದನ್ನು ಮಾಡಿ ತೋರಿಸಿಯಾಗಿತ್ತು.

ಇಂದು ಬೆಳಿಗ್ಗೆ ಬೇರೊಂದು ಕಂಪನಿಯಲ್ಲಿ ಸಿಕ್ಕಿದ ಆಫರ್ ನಿಂದಾಗಿ ಅದೇ ಚಿಕ್ಕ ಕೆಲಸಕ್ಕೆ ದೊಡ್ಡದಾದ ರಾಜಿನಾಮೆಯನ್ನು ಕೊಟ್ಟು ಮನೆಗೆ ಬಂದಾಗ ವಿವೇಕಾನಂದ ಕಾಲೇಜ್ ಗೆ ಅಪ್ಪ ಮಾಸ್ಟ್ರು ಅಜ್ಜ ಮಾಸ್ಟ್ರು ನಾನೂ ಮಾಸ್ಟ್ರು ಅಂತ ತೆಗೆದ ನಿರ್ಧಾರ ಎಷ್ಟು ಸಮಂಜಸವಾಗಿತ್ತು ಅಂತ ಅನಿಸದೆ ಖಂಡಿತ ಇರಲಿಲ್ಲ. ಥ್ಯಾಂಕ್ಸ್ ಪ್ರೀತಿ.

ಕೆಲವು ನಿರ್ಧಾರಗಳೇ ಹಾಗೆ, ಜೀವನವನ್ನೇ ಬದಲಾಯಿಸಿ ಬಿಡುತ್ತವೆ. ಇಲ್ಲದಿದ್ದಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿ ವಿವೇಕಾನಂದ ಕಾಲೇಜಿಗೆ ಉಪನ್ಯಾಸಕನಾಗಿ ಸೇರಬೇಕಿತ್ತೆ ?